ಜೀವಿವಿಷ -
ಜೀವಿಗಳಿಂದ ಉತ್ಪಾದಿತವಾಗಿ ಮಾನವರಿಗೆ ಮತ್ತು ಸಾಮಾನ್ಯವಾಗಿ ಇತರ ನಿಯತತಾಪೀ ಪ್ರಾಣಿಗಳಿಗೆ ವಿಷವಾಗಿರುವ ಸಂಕೀರ್ಣ ಪ್ರೋಟೀನ್ (ಟಾಕ್ಸಿನ್), ಜೀವಿವಿಷಗಳನ್ನು ಇತರ ಜೈವಿಕ ವಿಷವಸ್ತುಗಳಿಂದ ಭಿನ್ನವಾಗಿ ಗಣಿಸಬೇಕಾದುದು ಅಗತ್ಯ. ಸಸ್ಯಜೀವಿತವಾದ ನಿಕೋಟೀನ್, ಸ್ಟ್ರೀಕ್ನೀನ್ ಮುಂತಾದ ಆಲ್ಕಲಾಯ್ಡುಗಳೆಂಬ ಕ್ಷಾರಸ್ವಭಾವದ ವಸ್ತುಗಳನ್ನು ಜೀವಿವಿಷಗಳೆಂದು ಭಾವಿಸುವುದಿಲ್ಲ. ಸೂಕ್ಷ್ಮಾಣುಗಳಿಂದ ತಯಾರಾಗಿ ಇತರ ಸೂಕ್ಷ್ಮಾಣುಗಳಿಗೆ ವಿಷವಾಗಿ ಪರಿಣಮಿಸುವ ಪ್ರತಿಜೀವಕಗಳನ್ನು (ಆ್ಯಂಟಿ ಬಯೊಟಿಕ್ಸ್) ಕೂಡ. ಜೀವಿವಿಷಗಳೆಂದು ಪರಿಗಣಿಸುವುದಿಲ್ಲ. ಕಾರಣ ಅವು ಮಾನವರಿಗೆ ವಿಷವಾಗಿರುವುದಿಲ್ಲ. ವಿಷವಾಗಿರುವ ಪ್ರತಿಜೀವಕಗಳನ್ನೂ ಜೀವಿವಿಷಗಳ ಗುಂಪಿಗೆ ಸೇರಿಸಿಲ್ಲ. ಆರ್ಸೆನಿಕ್ ಸಂಯುಕ್ತಗಳು, ಸಯನೈಡುಗಳು ಮುಂತಾದ ಸಾಮಾನ್ಯ ರಾಸಾಯನಿಕ ಪಾಷಾಣಗಳು ಬೇರೆಯೇ ಗುಂಪಿನವು ಎನ್ನುವುದು ಸ್ಪಷ್ಟ.
ಜೀವಿವಿಷಗಳನ್ನು ಸಸ್ಯಜನಿತ, ಪ್ರಾಣಿಜನಿತ, ಸೂಕ್ಷ್ಮಾಣುಜನಿತವೆಂದು ಮೂರು ಬಗೆಗಳಾಗಿ ವಿಂಗಡಿಸುವುದು ಉಂಟು. ಸಸ್ಯಜನಿತ ಜೀವಿವಿಷಗಳು ಗುಲಗಂಜಿಯಿಂದ ಒದಗುವ ಏಬ್ರಿಸಿನ್, ಹರಳುಬೀಜದಿಂದ ಒದಗುವ ರಿಸಿನ್, ಜಾಪಾಳದಿಂದ ಒದಗುವ ಕ್ರೋಟನ್ಸ್ (ವಾಸ್ತವವಾಗಿ ಇದು ಕ್ರೋಟಾನಲ್ಲಿನ್ ಮತ್ತು ಕ್ರೋಟಿನ್ ಗ್ಲಾಬ್ಯುಲಿನ್ನುಗಳ ಮಿಶ್ರಣ) ಮತ್ತು ಉತ್ತರ ಅಮೆರಿಕದ ರೋಬಿನಿಯ ಸೂಡೋಅಕೇಶಿಯ ಎಂಬ ಸಸ್ಯದಿಂದ ಒದಗುವ ರೋಬಿನ್ ಇತ್ಯಾದಿಗಳು. ವಿಷಾಹಾರದಲ್ಲಿನ ಸೂಕ್ಷ್ಮಾಣುಜನಿತೆ ಜೀವಿವಿಷ ಒಂದನ್ನುಳಿದು ಮಿಕ್ಕ ಜೀವಿವಿಷಗಳು ಜೀರ್ಣವಾಗಿ ಹೋಗುತ್ತವೆ. ಆದರೆ ಸಸ್ಯಜನಿತ ಜೀವಿವಿಷಗಳು ಜೀರ್ಣರಸಗಳಿಂದ ಈ ತೆರನಾಗಿ ಜೀರ್ಣಿಸಲ್ಪಡುವುದಿಲ್ಲ. ಆದ್ದರಿಂದ ಅವನ್ನು ಸೇವಿಸಿದಾಗ ಅವು ಜೀರ್ಣನಾಳದ ಮೂಲಕ ರಕ್ತವನ್ನು ಸೇರಿ ವಿಷವಾಗಿ ಪರಿಣಮಿಸುತ್ತವೆ.

ಪ್ರಾಣಿಜನಿತ ಜೀವಿವಿಷಗಳು ಹಾವು ಚೇಳು ಜೇಡರಹುಳುಗಳಿಂದ ಉತ್ಪಾದಿತವಾದವು. ಬಹುಶಃ ಜೇನು, ಕಣಜ, ಕಟ್ಟುಗೊದ್ದ ಇತ್ಯಾದಿಗಳು ಕುಟುಕಿದಾಗ ಅಥವಾ ಕಚ್ಚಿದಾಗ ದೇಹದ ಒಳಹುಗುವ ವಸ್ತುಗಳನ್ನೂ ಈ ಗುಂಪಿಗೆ ಸೇರಿಸಬೇಕು. ಆದರೆ ಇವುಗಳಿಂದ ಸಾಮಾನ್ಯವಾಗಿ ಅಲ್ಪತೊಂದರೆ ಮಾತ್ರ ಉಂಟಾಗಿ ಜೀವಕ್ಕೆ ಅಪಾಯವಿಲ್ಲದಿರುವುದರಿಂದ ಇವನ್ನು ಇಲ್ಲಿ ವಿವರಿಸಿಲ್ಲ. ಹಾವುಗಳ ವಿಷದಲ್ಲಿ ಹೀಮೋಟಾಕ್ಸಿನ್ ಮತ್ತು ನ್ಯೂರೋಟಾಕ್ಸಿನ್ ಎಂಬ ಎರಡು ವಿಷವಸ್ತುಗಳು ಉಂಟು. ಮಂಡಲದಹಾವು, ಕಟ್ಟುಹಾವು, ಮೊಕಾಸಿನ್, ಬುಷ್‍ಮಾಸ್ಟರ್, ಕಾಪರ್‍ಹೆಡ್, ಬುಡುಬಡಿಕೆ ಹಾವು (ರ್ಯಾಟಲ್ ಸ್ನೇಕ್) ಇತ್ಯಾದಿಗಳ ವಿಷದಲ್ಲಿ ಹೀಮೋಟಾಕ್ಸಿನ್ ಪ್ರಧಾನ ಅಂಶ. ವಿಷದಿಂದ ಶೀಘ್ರವಾಗಿ ಮರಣ ಸಂಭವಿಸದಿದ್ದರೆ ಸ್ಥಳೀಯವಾಗಿ ರಕ್ತಸ್ರಾವ, ಊತ, ಕೀತುಕೊಳೆಯುವುದು-ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇವೇ ಉಲ್ಬಣಿಸಿ ಕೊನೆಗೆ ಸಾವನ್ನು ಉಂಟುಮಾಡಬಹುದು. ನಾಗರಹಾವು, ಕಾಳಿಂಗ, ಹವಳದಹಾವು, ಆ್ಯಡರ್ ಮತ್ತು ಮಾಂಬ ಇವುಗಳ ವಿಷದಲ್ಲಿ ನ್ಯೂರೋಟಾಕ್ಸಿನ್ ಪ್ರಧಾನ ಅಂಶ. ಆದ್ದರಿಂದ ಈ ಹಾವುಗಳು ಕಡಿದಾಗ ಸ್ಥಳೀಯ ಪ್ರತಿಕ್ರಿಯೆ ಕಡಿಮೆ. ಆದರೆ ವ್ಯಾಪಕವಾಗಿ ನರಗಳು ನಿಶ್ಚೇತನಗೊಳ್ಳುವುದರಿಂದ ಉಸಿರಾಟ, ಗುಂಡಿಗೆ ಮಿಡಿತ ಇವು ಸ್ಥಗಿತವಾಗಿ ಶೀಘ್ರ ಮರಣದ ಸಂಭಾವ್ಯತೆ ಹೆಚ್ಚು. ಚೇಳುಗಳು ಹಾಗೂ ಅವುಗಳ ವಿಷಗಳಲ್ಲಿ ಕೂಡ ಎರಡು ಬಗೆ. ಒಂದರಲ್ಲಿ ಕುಟುಕಿದ ಸ್ಥಳದಲ್ಲಿ ತೀವ್ರ ಉರಿ, ನೋವು, ಛಳಕು, ಊತಗಳು ಉಂಟಾಗಿ ಕೆಲವು ಗಂಟೆಗಳಲ್ಲೆ ಶಮನವಾಗುತ್ತವೆ. ಕಣಜ ಕುಟುಕಿದ್ದಕ್ಕಿಂತ ಸ್ವಲ್ಪ ಹೆಚ್ಚು ಬಾಧೆ ಇರಬಹುದು. ಅಷ್ಟೇ. ಭಾರತದಲ್ಲಿ ಸಾಮಾನ್ಯವಾಗಿ ಇರುವ ಚೇಳುಗಳ ವಿಷ ಇಂಥದು. ಇನ್ನೊಂದು ಬಗೆಯ ಚೇಳಿನ ವಿಷದಲ್ಲಿ ನರಜೀವಿವಿಷ (ನ್ಯೂರೋಟಾಕ್ಸಿನ್) ಉಂಟು. ಇದು ನರಗಳ ಮೇಲೆ ಸ್ಟ್ರಿಕ್ನಿನ್ನಿನಂತೆ ಪ್ರಭಾವಿಸಿ ಕೆಲವು ವೇಳೆ ಮಾರಕವಾಗಬಹುದು. ಇಂಥ ವಿಷ ಉತ್ತರ ಅಮೆರಿಕದ ಅನೇಕ ಜಾತಿಯ ಜೇಳುಗಳಲ್ಲಿ ಇದೆ. ಜೇಡರಹುಳುಗಳು ಬಲೆಗೆ ಸಿಕ್ಕಿಕೊಂಡ ಹುಳು ಹುಪ್ಪಟೆಗಳನ್ನು ಕಚ್ಚಿ ವಿಷದಿಂದ ಸಾಯಿಸುವುದು ಸಾಮಾನ್ಯ. ಆದರೆ ಅವು ಮಾನವರನ್ನು ಮತ್ತು ಪ್ರಾಣಿಗಳನ್ನು ಕಚ್ಚುವುದಾಗಲಿ, ಕಚ್ಚಿದರೆ ಅದರಿಂದ ಹೆಚ್ಚು ತೊಂದರೆ ಆಗುವುದಾಗಲಿ ಭಾರತದಲ್ಲಿ ವರದಿ ಆಗಿಲ್ಲ. ದಕ್ಷಿಣ ಅಮೆರಿಕದ ಬ್ಯಾಕ್‍ವಿಡೋ ಜೇಡ ಯೂರೋಪಿನ ಟಾರಾನ್‍ಟ್ಯುಲ ಮುಂತಾದವು ಕಚ್ಚಿದಾಗ ದೇಹದ ಒಳಹೋಗುವ ನರಜೀವಿ ವಿಷದ ಗುಂಪಿಗೆ ಸೇರಿದ ವಿಷವಸ್ತು ಗಣನೀಯ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಬಹು ಅಪರೂಪವಾಗಿ ಇದು ಮಾರಕವೂ ಆಗಬಹುದು.

ಸೂಕ್ಷ್ಮಾಣುಜನಿತ ಜೀವಿವಿಷಗಳನ್ನು ವ್ಯಾಪಕವಾಗಿ ವ್ಯಾಸಂಗಿಸಲಾಗಿರುವುದರಿಂದ ಅವುಗಳ ಲಕ್ಷಣಗಳು, ಕ್ರಿಯಾವಿಧಾನ ಮುಂತಾದವೆಲ್ಲ ವಿಶದವಾಗಿ ತಿಳಿದಿವೆ. ವಿಷಾಣುಗಳ ವಿಷ ಎರಡು ಬಗೆ. ಬಾಹ್ಯ ಜೀವಿವಿಷ (ಎಕ್ಸೋಟಾಕ್ಸಿನ್) ಮತ್ತು ಆಂತರಿಕ ಜೀವಿವಿಷ (ಎನ್ಡೋಟಾಕ್ಸಿನ್). ಹಾವಿನ ವಿಷ ಇತ್ಯಾದಿ ಜೀವಿವಿಷಗಳಂತೆ ಬಾಹ್ಯಜೀವಿವಿಷಗಳೂ ಕೆಲವು ಪ್ರಧಾನವಾಗಿ ಹೀಮೋಟಾಕ್ಸಿನ್ನುಗಳಂತೆ, ಕೆಲವು ಪ್ರಧಾನವಾಗಿ ನ್ಯೂರೋಟಾಕ್ಸಿನ್ನುಗಳಂತೆ ವರ್ತಿಸುತ್ತವೆ. ಬಾಹ್ಯಜೀವಿವಿಷಗಳ ಪರಿಣಾಮಗಳನ್ನು ಡಿಫ್ತೀರಿಯ, ಧನುರ್ವಾಯ, ಅನಿಲಯುಕ್ತ ಕೊಳೆತ (ಗ್ಯಾಸ್ ಗ್ಯಾಂಗ್ರೀನ್) ಮುಂತಾದ ಸೋಂಕು ರೋಗಗಳಲ್ಲಿ ಕಾಣಬಹುದು. ಅಲ್ಲದೆ ಅಂತರಕೋಶೀಯ ವಸ್ತು (ಇಂಟರ್ ಸೆಲ್ಲುಲರ್ ಸಬ್‍ಸ್ಟೆನ್ಸ್) ದ್ರವೀಕರಿಸಲ್ಪಡುವುದರಿಂದ ವಿಷಾಣುಗಳು ದೇಹದಲ್ಲಿ ತಡೆಯಿಲ್ಲದೆ, ವ್ಯಾಪಕವಾಗಿ ಹರಡಲು ಅಥವಾ ವಿಷ ಹರಡಲು ಸಹಕಾರಿಯಾಗಿದೆ. ಸ್ಟ್ರೆಪ್ಟೋಕಾಕಸ್. ಸ್ಟಾಫಿಲೋಕಾಕಸ್ ಹಾಗೂ ಗ್ಯಾಸ್‍ಗ್ಯಾಂಗ್ರೀನ್ ಕಾರಕ ವಿಷಾಣುಗಳ ಸೋಂಕಿನಲ್ಲಿ ಇದು ವ್ಯಕ್ತವಾಗಿದೆ. ವಿಷಯುಕ್ತ ಆಹಾರ ಸೇವನೆಯ ಪ್ರಸಂಗಗಳಲ್ಲಿ ಆಹಾರದಲ್ಲಿ ಸ್ಟಾಫಿಲೋಕಾಕಸ್ ಮುಂತಾದ ವಿಷಾಣುಗಳ ಬಾಹ್ಯಜೀವಿವಿಷಗಳು ಜಠರ, ಕರುಳುಗಳ ಮೇಲೆ ವರ್ತಿಸಿ ಹೊಟ್ಟೆತೊಳಸು, ವಾಂತಿ, ಭೇದಿಗಳನ್ನು ಉಂಟುಮಾಡುತ್ತವೆ. ವಿಶಿಷ್ಟ ಹಾಗೂ ಅಪಾಯಕಾರಿಗಳಾದ ಇಂಥ ಬಾಹ್ಯಜೀವಿವಿಷಗಳು ಸಾಮಾನ್ಯವಾಗಿ ಗ್ರಾಮ್‍ಧನ (ಗ್ರಾಮ್‍ಪಾಸಿಟಿವ್) ವಿಷಾಣುಗಳಿಂದ ಸ್ರವಿಸ್ಪಡುತ್ತವೆ. ಇವುಗಳೆಲ್ಲ 70,000-9,00,000 ಗಳಷ್ಟು ಒಟ್ಟು ಪರಮಾಣುತೂಕವುಳ್ಳ ಪ್ರೋಟೀನುಗಳು. ಕೆಲವನ್ನು ಶುದ್ಧೀಕರಿಸಿ ಹರಳುಗಳನ್ನಾಗಿ ಬೇರ್ಪಡಿಸಿದೆ (ಧನುರ್ವಾಯು, ಬಾಟ್ಯುಲಿಸಮ್‍ಗಳಲ್ಲಿನ ವಿಷ). ಕೆಲವನ್ನು ನುಣುಪಾದ ಹುಡಿಯಂತೆ ಬೇರ್ಪಡಿಸಿದೆ (ಡಿಫ್ತೀರಿಯ ವಿಷ). ಇವು ತೀವ್ರ ವಿಷವಸ್ತುಗಳು. ಗ್ರಾಮ್. ತೂಕ ಡಿಫ್ತೀರಿಯ ವಿಷ 150 ಟನ್ನುಗಳಷ್ಟು ತೂಕದ ಗಿನಿಹಂದಿಗಳನ್ನು ಕೊಲ್ಲಬಹುದು. ಗ್ರಾಮ್‍ತೂಕ ಬ್ಯಾಟ್ಯುಲಿಸಮ್ ವಿಷ 50ಲಕ್ಷ ಇಲಿಗಳನ್ನು ಕೊಲ್ಲಬಲ್ಲದು ಎಂದು ಅಂದಾಜುಮಾಡಿದ್ದಾರೆ. ಆಮ್ಲ, ಕ್ಷಾರ, ಕಿಣ್ವವಸ್ತುಗಳು ಇವುಗಳ ವಿಷಸ್ವಭಾವವನ್ನು ಪೂರ್ಣವಾಗಿ ನಾಶಮಾಡುತ್ತವೆ. ಈ ಸಂದರ್ಭಗಳಲ್ಲಿ ಪ್ರೋಟೀನ್ ಬೃಹದಣುವಿನ ರಚನೆ ನಾಶವಾಗುವುದೆಂದು ತಿಳಿದಿದೆ. ಆದ್ದರಿಂದ ಜೀವಿವಿಷ ಪ್ರೋಟೀನ್ ರಚನೆಯನ್ನು ಪಡೆದಿರುವಾಗ ಮಾತ್ರ ವಿಷವಾಗಿ ವರ್ತಿಸಬಲ್ಲದೆಂದು ಗೊತ್ತಾಗುತ್ತದೆ. 600 ಅ ಉಷ್ಣತೆ, ಫಾರ್ಮಲಿನ್ನಿನೊಂದಿಗೆ ಮಿಶ್ರಣ, ದೀರ್ಘಕಾಲಿಕ ಶೇಖರಣೆ ಇವುಗಳಿಂದಲೂ ವಿಷಗುಣ ನಾಶವಾಗುತ್ತದೆ. ಈ ವಿಧಾನಗಳಲ್ಲಿ ತಕ್ಕ ಹತೋಟಿ ಏರ್ಪಡಿಸಿ ವಿಷಗುಣ ಪೂರ್ಣವಾಗಿ ನಾಶಹೊಂದದಂತೆ ಮಾಡಿ ವಿಷವನ್ನು ದುರ್ಬಲೀಕರಿಸಬಹುದು. ಕಚ್ಚಾಜೀವಿವಿಷಕ್ಕೆ ಪಟಿಕವನ್ನು ಸೇರಿಸಿದರೆ ವಿಷ ದುರ್ಬಲಗೊಳ್ಳುವುದೇ ಅಲ್ಲದೆ ದ್ರಾವಣದಿಂದ ಗರಣೆಯಾಗಿ ಬೇರ್ಪಟ್ಟು ಶುದ್ಧವಸ್ತುವಾಗಿ ತಳಸೇರುತ್ತದೆ. ಜೀವಿವಿಷಗಳು ವಿಷಹಾರಿಗಳೂ ಆಗಿರುವುದರಿಂದ ಉಷ್ಣತೆ, ಫಾರ್ಮಲಿನ್ ಶೇಖರಣೆಗಳಿಂದ ದುರ್ಬಲೀಕರಿಸಿದ ವಿಷಗಳನ್ನು (ಟಾಕ್ಸಾಯ್ಡುಗಳು) ಉಪಯೋಗಿಸಿ ದೇಹದಲ್ಲಿ ವಿಷಹಾರಿಯ ಉತ್ಪನ್ನವನ್ನು ಪ್ರಚೋದಿಸಬಹುದು. ಡಿಫ್ತೀರಿಯ, ಧನುರ್ವಾಯು ಮುಂತಾದ ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು ಈ ವಿಧಾನವನ್ನು ಅನುಸರಿಸಲಾಗುತ್ತದೆ. ಪಟಿಕದ ಮಿಶ್ರಣದಿಂದ ಗರಣೆ ಕಟ್ಟಿಸಿ ತಯಾರಿಸಿದ ಶುದ್ಧ ದುರ್ಬಲೀಕೃತ ಜೀವಿವಿಷರಕ್ಷಣೆ ಒದಗಿಸುವ ವಿಷಯದಲ್ಲಿ ಬಹುಪರಿಣಾಮಕಾರಿ.

ಬಾಹ್ಯಜೀವಿವಿಷಗಳ ಕ್ರಿಯಾವಿಧಾನ : ಡಿಫ್ತೀರಿಯ ವಿಷದ ವ್ಯಾಸಂಗಗಳಿಂದ ಸಾಮಾನ್ಯವಾಗಿ ಎಲ್ಲ ಜೀವಾಣುಗಳಿಗೂ ಅಗತ್ಯವಾಗಿರುವ ಸೈಟೋಕ್ರೋಮ್ ಎಂಬ ಕಿಣ್ವದ ಪ್ರೋಟೀನ್ ಭಾಗವನ್ನು ಅದು ಹೋಲುವುದು ತಿಳಿದುಬಂದಿದೆ. ಕಬ್ಬಿಣದ ಆಯಾನು ಮತ್ತು ಪಾರ್ಫಿರಿನ್ ಘಟಕ ವಿಶಿಷ್ಟ ಪ್ರೋಟೀನಿನ ಜೊತೆ ಸಂಯೋಜನೆಗೊಂಡು ಸೈಟೋಕ್ರೋಮ್ ಉತ್ಪತ್ತಿಯಾಗುತ್ತದೆ. ಆದರೆ ನೆರೆಯಲ್ಲಿ ಡಿಫ್ತೀರಿಯ ವಿಷ ಇದ್ದರೆ ಕಬ್ಬಿಣ ಹಾಗೂ ಪಾರ್ಫಿರಿನ್ ಘಟಕಗಳು ಸೈಟೋಕ್ರೊಮ್ ಪ್ರೋಟೀನಿನ ಬದಲು ಇದರೊಡನೆಯೇ ಸಂಯೋಗವಾಗುತ್ತದೆ. ಇಂಥ ವರಣರೀತಿಯ ಸಂಯೋಗದಿಂದ (ಪ್ರಿಫರೆನ್‍ಷಿಯಲ್ ಕಾಂಬಿನೇಷನ್) ಸೈಟೋಕ್ರೋಮು ಅಗತ್ಯವಾದಷ್ಟು ಒದಗದೆ ನರಸ್ನಾಯುಗಳ (ಮುಖ್ಯವಾಗಿ ಗುಂಡಿಗೆ ಶ್ವಾಸಾಂಗಗಳ) ಕ್ರಿಯೆ ಸ್ಥಗಿತಗೊಳ್ಳುತ್ತದೆ. ಪರಿಣಾಮ ಮರಣ. ಬಹುಶಃ ನರಜೀವಿವಿಷಗಳು ಸಾಮಾನ್ಯವಾಗಿ ಹೀಗೆಯೇ ವರ್ತಿಸುತ್ತವೆ. ಹೀಮೋಟಾಕ್ಸಿನ್ನುಗಳು ಕೊಬ್ಬಿನ ಮೇಲೆ ವರ್ತಿಸುವ ಕಿಣ್ವಗಳಂಥ ಕ್ರಿಯೆ ಉಳ್ಳವು. ಕೋಶಗಳ ಭಿತ್ತಿಯ ಲೈಪೋಪ್ರೋಟೀನ್ ಎಂಬ ಕೊಬ್ಬಿನ ಅಂಶದ ಮೇಲೆ ವರ್ತಿಸಿ ಜಲವಿಶ್ಲೇಷಣದಿಂದ ಅದನ್ನು ನಾಶಮಾಡುತ್ತವೆ. ತತ್ಫಲವಾಗಿ ಭಿತ್ತಿಯ ರಂಧ್ರಗಳು ಹಿಗ್ಗಿ ಕೋಶದ ಒಳವಸ್ತುಗಳು ಹೊರಬಂದು ಕೋಶ ನಾಶವಾಗುತ್ತದೆ. ಕೆಂಪು ರಕ್ತಕಣಗಳಲ್ಲಿ ಹೀಗಾಗುವುದರಿಂದ ಹೀಮೋಗ್ಲಾಬಿನ್ ಹೊರಬಂದು ರಕ್ತದ್ರವದಲ್ಲಿ ಸೇರಿ ಇನ್ನು ಬೇರೆ ಜಟಿಲತೆಗಳನ್ನು ಉಂಟುಮಾಡುವುದು. ಶ್ವೇತರಕ್ತಕಣಗಳು ಹಾಗೂ ಕಬಳಿಸುವ ಜೀವಾಣುಗಳೂ (ಫೇಗೋಸೈಟ್ಸ್) ಇದೇ ರೀತಿ ನಾಶವಾಗುತ್ತವೆ. ಲೋಮ ನಾಳಗಳ ಭಿತ್ತಿಯ ಪಾರಗಮ್ಯತೆ (ಪರ್ಮಿಯೆಬಿಲಿಟಿ) ಹೆಚ್ಚಿ ರಕ್ತಸ್ರಾವ ಅಲ್ಲಲ್ಲೆ ಆಗುವುದು. ಹೀಮೊಟಾಕ್ಸಿನ್ ರಕ್ತಗತವಾದ ಬಹು ಸ್ವಲ್ಪ ಕಾಲದಲ್ಲೆ ಅನೇಕ ವೇಳೆ ಮರಣ ಸಂಭವಿಸುವುದರಿಂದ ಅದರ ವಿಷಗುಣದಿಂದ ವೇಗತರವಾದ ಇನ್ನೂ ಬೇರೆ ಪರಿಣಾಮ ಉಂಟಾಗುವದು ಎನ್ನಿಸಿದೆ. ಆದರೆ ಸ್ಪಷ್ಟವಾಗಿಲ್ಲ. ಹಾವಿನ ವಿಷದ ಹೀಮೋಟಾಕ್ಸಿನ್ನಿನ ವರ್ತನೆ ಸ್ವಲ್ಪ ಭಿನ್ನ. ಇದಕ್ಕೂ ಲೈಪೋಪ್ರೋಟೀನನ್ನು ಜಲವಿಶ್ಲೇಷಣಗೊಳಿಸುವ ಗುಣ ಉಂಟು. ಆದರೆ ವಿಶ್ಲೇಷಣೆ ಪೂರ್ಣವಾಗದೆ ಲೈಸೋಲೆಸಿಥಿನ್ ಎಂಬ ವಸ್ತು ಉತ್ಪನ್ನವಾಗುವುದು. ಹಾವು ಕಡಿದಾಗ ಉಂಟಾಗುವ ನೋವು, ಊತ, ರಕ್ತಸ್ರಾವ ಇವುಗಳಿಗೆ ಸ್ವತಃ ಹಾವಿನ ವಿಷದ ಹೋಮೋಟಾಕ್ಸಿನ್ನಿಗಿಂತ ಹೆಚ್ಚಾಗಿ ಲೈಸೋಲೆಸಿಥಿನೇ ಕಾರಣ. ಅನಿಲಯುಕ್ತ ಕೊಳೆತ ಕಾರಕ ವಿಷಾಣು ಉತ್ಪಾದಿಸುವ ಹೀಮೋಟಾಕ್ಸಿನ್ ಜೀವಕೋಶಗಳ ಮೇಲೆ ನೇರವಾಗಿ ವರ್ತಿಸಿ ಅವನ್ನು ನಾಶಮಾಡುತ್ತದೆ; ಲೈಸೋಲೆಸಿಥಿನ್ನನ್ನು ಬಿಡುಗಡೆ ಮಾಡಿ ಅಲ್ಲ. ಅಲ್ಲದೆ ಇದರ ಕ್ರಿಯೆಗೆ ಕ್ಯಾಲ್ಸಿಯಮ್ ಅಯಾನುಗಳು ಅಗತ್ಯ ಎಂದು ತಿಳಿದಿದೆ. ಕೋಶಗಳ ನಡುವೆ ಘನವೂ ಅಲ್ಲದ ದ್ರವವೂ ಅಲ್ಲದ ಹಯಲ್ಯೂರೋನಿಕ್ ಆಮ್ಲವೆಂಬ ಮಾಧ್ಯಮ ವಸ್ತು ಉಂಟು. ಇದರ ಮೂಲಕ ವಿಷಾಣುಗಳ ವ್ಯಾಪಿಸುತ್ತ ಸೋಂಕನ್ನು ನೆರೆಗೆಲ್ಲ ಹರಡುವುದು ಕಷ್ಟ. ಅನೇಕ ವಿಷಾಣುಗಳು (ಸ್ಟ್ರೆಪ್ಟೋಕಾಕಸ್, ಕೊಳೆತಕಾರಕ ವಿಷಾಣು) ಸ್ರವಿಸುವ ಬಾಹ್ಯಜೀವಿವಿಷದಲ್ಲಿ ಹಯಲ್ಯೂರೇನಿಡೇಸ್ ಅಥವಾ ಇನ್‍ವೇಸಿನ್ ಇದೆ. ಇದು ಹಯಲ್ಯೂರೋನಿಕ್ ಆಮ್ಲವನ್ನು ವಿಶ್ಲೇಷಿಸಿ ದ್ರವೀಕರಿಸುವುದರಿಂದ ವಿಷಾಣುಗಳು ನೆರೆಯಲ್ಲೆಲ್ಲ ವ್ಯಾಪಿಸುವುದು ಸಾಧ್ಯ. ಆದರೆ ಹಯಲ್ಯೂರೋನಿಕ್ ಆಮ್ಲ-ಇನ್ ವೇಸಿನ್ನುಗಳಂತೆ ಪರಸ್ಪರ ಸಂಬಂಧವುಳ್ಳ ಇನ್ನೂ ಕೆಲವು ವಸ್ತುಗಳು ಪಾಲುಗೊಂಡು ಸಮಕಾಲಿಕವಾಗಿ ನಾನಾಕ್ರಿಯೆ ಪ್ರತಿಕ್ರಿಯೆಗಳು ಉಂಟಾಗುವುವೆಂಬುದಕ್ಕೆ ಆಧಾರ ಉಂಟು. ಜೀವಿವಿಷದಲ್ಲಿರುವ ಇನ್‍ವೇಸಿನ್ನನ್ನು ನಿಷ್ಕ್ರಿಯೆಗೊಳಿಸಬಲ್ಲ ಆ್ಯಂಟಿಇನ್‍ವೇಸಿನ್- I ಎಂಬ ವಸ್ತು ಸಾಮಾನ್ಯವಾಗಿ ರಕ್ತದಲ್ಲಿ ಇದೆ. ವಿಷಾಣುಗಳು ನೆರೆಪ್ರಾಂತ್ಯಕ್ಕೆ ವ್ಯಾಪಿಸುವುದನ್ನು ಇದು ತಡೆಯುವುದೆನ್ನುವುದು ವ್ಯಕ್ತ. ಆದರೆ ಜೀವಿವಿಷದಲ್ಲಿ ಇರು ಪ್ರೋಇನ್‍ವೇಸಿನ್ - I ಎಂಬುದು ಆ್ಯಂಟಿಇನ್‍ವೇಸಿನ್ - I ಇದರ ಕ್ರಿಯೆಗೆ ಅಡ್ಡಿಯನ್ನು ಉಂಟುಮಾಡುವುದರಿಂದ ಸೋಂಕು ವ್ಯಾಪಿಸಬಹುದು. ಹೀಗಾಗುವುದನ್ನು ತಪ್ಪಿಸಲು ರಕ್ತದಲ್ಲಿ ಆ್ಯಂಟಿಇನ್‍ವೇಸಿನ್-II ಎಂಬ ವಸ್ತು ಇದೆ. ಇದು ಪ್ರೋಇನ್‍ವೇಸಿನ್ನನ್ನು ನಿಷ್ಕ್ರಿಯಗೊಳಿಸುವಂಥದು. ಇವೆಲ್ಲ ವಸ್ತುಗಳೂ ಒಂದರೊಡನೆ ಒಮದು ಸಮಕಾಲೀನವಾಗಿ ಪ್ರವರ್ತಿಸುವುದರಿಂದ ವಿಷಾಣುಸೋಂಕಿನ ವ್ಯಾಪನೆ ಇಲ್ಲವೇ ಸ್ಥಳೀಯವಾಗಿ ನೆಲೆಗೊಳ್ಳುವಿಕೆ ಒಟ್ಟಿನ ಕ್ರಿಯೆ ಪ್ರತಿಕ್ರಿಯೆಗಳ ಅಂತ್ಯ ಪರಿಣಾಮವನ್ನು ಅವಲಂಬಿಸಿದೆ. ದೇಹದಲ್ಲಿ ವಿಷಾಣು ಪ್ರಸಾರ ಇನ್ನೊಂದು ರೀತಿಯಲ್ಲಿ ಉಂಟಾಗಬಹುದು. ಉದಾಹರಣೆಗೆ, ಸ್ಟ್ರೆಪ್ಟೋಕಾಕಸುಗಳ ಬಾಹ್ಯಜೀವಿವಿಷದಲ್ಲಿರುವ ಸ್ಟ್ರೆಪ್ಟೋಕೈನೇಸ್ ಎಂಬ ವಸ್ತು ಈ ರೀತಿ ವ್ಯಾಪನೆಗೆ ಕಾರಣ. ಸ್ಟ್ರೆಪ್ಟೋಕಾಕಸ್ಸಿನ ಸೋಂಕು ಉಂಟಾದಾಗ ಅದು ಸ್ಥಳೀಯವಾಗಿ ನೆಲೆಗೊಳ್ಳುವಂತೆ ದೇಹದಲ್ಲಿ ಸಹಜಪ್ರತಿಕ್ರಿಯೆ ಸಾಮಾನ್ಯವಾಗಿ ಉಂಟಾಗುವುದು. ತತ್ಫಲವಾಗಿ ಫೈಬ್ರಿನ್ ಎಂಬ ವಸ್ತು ಆ ಸ್ಥಳದಲ್ಲಿ ಉತ್ಪಾದಿತವಾಗಿ ಸೋಂಕಿನ ಸ್ಥಳದ ಸುತ್ತ ಗೋಡೆಯಂತೆ ರಚನೆಗೊಳ್ಳುತ್ತದೆ. ಈ ಫೈಬ್ರಿನ್‍ಗೋಡೆ ರಾಸಾಯನಿಕ ಕ್ರಿಯೆಯಿಂದ ಶಿಥಿಲಗೊಂಡು ಸೋಂಕು ವ್ಯಾಪಿಸುವಂತೆ ಸ್ಟ್ರೆಪ್ಟೋಕೈನೇಸ್ ಅವಕಾಶ ಮಾಡಿಕೊಡುವುದು. ಆದರೆ ಇದು ನೇರಕ್ರಿಯೆ ಅಲ್ಲ. ಫೈಬ್ರಿನ್ನನ್ನು ಶಿಥಿಲಗೊಳಿಸುವ ವಸ್ತು ಫೈಬ್ರಿನೋಲೈಸಿನ್. ಇದರ ಜನಕವಸ್ತು ಪ್ರೊಫೈಬ್ರಿನೋಲೈಸಿನ್ ರಕ್ತದಲ್ಲಿ ನೈಸರ್ಗಿಕವಾಗಿ ಇರುವುದು. ಪ್ರೋಫೈಬ್ರಿನೋಲೈಸಿನ್ನಿನ ಮೇಲೆ ಸ್ಟ್ರೆಪ್ಟೋಕೈನೇನ್ ವರ್ತಿಸಿ ಅದನ್ನು ಫೈಬ್ರಿನೋಲೈಸಿನ್ನಾಗಿ ಮಾರ್ಪಡಿಸುತ್ತದೆ. ಇದು ಫೈಬ್ರಿನ್ನನ್ನು ಜೀರ್ಣಿಸುವುದು ಅನಂತರದ ಕ್ರಿಯೆ. ಆದರೆ ರಕ್ತದಲ್ಲಿ ಆ್ಯಂಟಿಫೈಬ್ರೋಕೈನೇಸ್ ಎಂಬ ವಸ್ತು ಇದ್ದು ಇದು ಫೈಬ್ರೋಕೈನೇಸಿನ ಕ್ರಿಯೆಗೆ ಅಡ್ಡಿ ಮಾಡುತ್ತದೆ. ಆದ್ದರಿಂದ ಕೊನೆಯ ಪರಿಣಾಮ ಈ ಎಲ್ಲ ರಾಸಾಯನಿಕಗಳ ಪರಸ್ಪರ ಕ್ರಿಯೆಗಳ ಕೊನೆಯ ಫಲಿತಾಂಶದ ಮೇಲೆ ಅವಲಂಬಿಸಿದೆ; ಇನ್‍ವೇಸಿನ್ ವಿಷಯದಲ್ಲಿ ಇದ್ದ ಹಾಗೆಯೇ.
ಒಟ್ಟಿನಲ್ಲಿ ವಿಷಾಣುಗಳ ಸೋಂಕು ಉಂಟಾದಾಗ ವಿಷಾಣುಗಳೇ ಕೋಶಗಳ ಒಳಹೊಕ್ಕು ಅವನ್ನು ನಾಶಮಾಡಬಹುದು (ಕೆಲವು ಕಾಕೈಗಳು). ಬಾಹ್ಯಜೀವಿ ವಿಷವನ್ನು ಸ್ರವಿಸಿ ವಿಷಮಾವಸ್ಥೆ (ಟಾಕ್ಸೀಮಿಯ) ಕೋಶನಾಶಗಳನ್ನು ಮಾಡಬಹುದು (ಡಿಫ್ತೀರಿಯ ಅಣು, ಗ್ಯಾಸ್‍ಗ್ಯಾಂಗ್ರೀವ್‍ಕಾರಕ). ವಿಷಮಾವಸ್ಥೆ ತೀವ್ರವಾಗಿದ್ದರೂ ವಿಷವಸ್ತು ಅನಿರ್ದಿಷ್ಟವಾಗಿರಬಹುದು (ನ್ಯೂಮೋಕಾಕಸ್). ಕೆಲವು ಸಂದರ್ಭಗಳನ್ನು ಕೆಳಗೆ ವಿವರಿಸಿದೆ.

ಡಿಫ್ತೀರಿಯ : ವಿಷಾಣುವಿನ ಹೆಸರು ಕೊರೈನಿಬ್ಯಾಕ್ಟೀರಿಯಮ್ ಡಿಫ್ತೀರಿಯ. ಸೋಂಕು ಸಾಮಾನ್ಯವಾಗಿ ಮೂಗುಗಂಟಲುಗಳ ಲೋಳೆಪೊರೆಗೆ ಸೀಮಿತವಾಗಿರುವುದು. ಅಪರೂಪವಾಗಿ ಚರ್ಮಕ್ಕೆ ಸೋಂಕುತಗಲಬಹುದು. ಹುಟ್ಟಿದ ಮಕ್ಕಳ ಹೊಕ್ಕಳ ಸುತ್ತ ಈ ರೀತಿ ಸೋಂಕು ವ್ಯಕ್ತವಾಗುತ್ತದೆ. ಅಂತೂ ಸೋಂಕು ಕೇವಲ ಸ್ವಲ್ಪ ಸ್ಥಳದಲ್ಲಿ ನೆಲೆಗೊಳ್ಳುವಂಥದು, ವ್ಯಾಪಕವಾಗಿ ಹರಡುವುದಿಲ್ಲ. ಆದರೆ ಅಷ್ಟು ಸ್ವಲ್ಪ ಸ್ಥಳದಲ್ಲೆ ವಿಷಾಣುಗಳು ಬಹುವಾಗಿ ವೃದ್ಧಿಸಿ ಅಗಾಧ ಪ್ರಮಾಣದಲ್ಲಿ ವಿಷವನ್ನು ಉತ್ಪಾದಿಸುತ್ತವೆ. ವಿಷವು ರಕ್ತಗತವಾಗಿ ದೇಹದಲ್ಲೆಲ್ಲ ವ್ಯಾಪಿಸುತ್ತದೆ. ವಿಷದ ಪರಿಣಾಮವಾಗಿ ವಿಸರ್ಜಿತವಾಗಬೇಕಾದ ವಸ್ತುಗಳು ಮೂತ್ರಪಿಂಡ, ಗುಂಡಿಗೆ, ಮಿದುಳುಗಳಲ್ಲಿ ಶೇಖರಗೊಂಡು, ಗುಂಡಿಗೆ ಮಿಡಿತ ನಿಂತು ಇಲ್ಲವೇ ಸ್ನಾಯುಗಳ ಸ್ವಾಧೀನತಪ್ಪಿ ಉಸಿರುಕಟ್ಟಿಕೊಂಡು ಸಾವು ಉಂಟಾಗಬಹುದು. ಎಲ್ಲವೂ ಬಾಹ್ಯ ಜೀವಿವಿಷದ ಪರಿಣಾಮಗಳೇ ಆದ್ದರಿಂದ ಈ ವಿಷಕ್ಕೆ ತಕ್ಕ ವಿಷಹಾರಿಯನ್ನು ಕೊಟ್ಟು ಚಿಕಿತ್ಸಿಸಬೇಕು. ವಿಷಾಣುಗಳ ಹತೋಟಿ ಅಷ್ಟು ಮುಖ್ಯವಲ್ಲ. ವಿಷಮ ಪರಿಸ್ಥಿತಿ ಮುಂದುವರಿಯದಂತೆ ಮಾಡುವುದಕ್ಕೆ ಮಾತ್ರ ಅವುಗಳ ಹತೋಟಿ ಅಗತ್ಯ. ಇದಕ್ಕೆ ಪೆನಿಸಿಲಿನ್ನನ್ನು ಕೊಡುವುದುಂಟು. ಆದರೆ ವಿಷದ ಪರಿಣಾಮವನ್ನು ತಪ್ಪಿಸುವುದಕ್ಕೆ ತತ್‍ಕ್ಷಣದ ಚಿಕಿತ್ಸೆ ಅಗತ್ಯ. ಇದಕ್ಕಾಗಿ ಡಿಫ್ತೀರಿಯ ವಿಷಹಾರಿಯನ್ನು ಚುಚ್ಚುಮದ್ದಾಗಿ ಅಗತ್ಯಪ್ರಮಾಣದಲ್ಲಿ ಅವಶ್ಯವಾಗುವಷ್ಟು ಕಾಲ ಕೊಡಬೇಕು. ಈ ಜೀವಿವಿಷಹಾರಿಯನ್ನು (ಆ್ಯಂಟಿಟಾಕ್ಸಿನ್) ಕುದುರೆ ಮುಂತಾದ ಪ್ರಾಯೋಗಿಕಪ್ರಾಣಿಗಳಲ್ಲಿ ಅಧಿಕವಾಗಿ ಉತ್ಪಾದನೆ ಆಗುವಂತೆ ಕೃತಕಪ್ರಚೋದನೆಯಿಂದ ಮಾಡಿ ಬೇರ್ಪಡಿಸಲಾಗುತ್ತದೆ. ವಿಷಾಣುವನ್ನೋ ಪ್ರತ್ಯಕ್ಷ ವಿಷವನ್ನೋ ದುರ್ಬಲೀಕರಿಸಿದ ವಿಷವನ್ನೋ ಚುಚ್ಚುಮದ್ದಿನಿಂದ ಅಲ್ಪ ಪ್ರಮಾಣದಲ್ಲಿ ಪ್ರಾಣಿ ದೇಹದೊಳಹೊಗಿಸಿ ಕೃತಕ ಪ್ರಚೋದನೆಯನ್ನು ಉಂಟುಮಾಡುತ್ತಾರೆ. ಅನಂತರ ಅನೇಕ ಬಾರಿ ಕ್ರಮೇಣ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಪ್ರಚೋದನೆ ಮುಂದುವರಿಯುತ್ತದೆ. ವಿಷಹಾರಿ ಗಣನೀಯವಾಗಿ ಉತ್ಪಾದಿತವಾದ ಬಳಿಕ ಪ್ರಾಯೋಗಿಕ ಪ್ರಾಣಿಯ ರಕ್ತದಿಂದ ಅದನ್ನು ಬೇರ್ಪಡಿಸಿ ನಿರ್ದಿಷ್ಟ ಅಂತಾರಾಷ್ಟ್ರೀಯ ಏಕ ಮಾನಗಳಿರುವಷ್ಟು ವಸ್ತುವನ್ನು ಗಾಜಿನ ಬುರುಡೆಗಳಲ್ಲಿಟ್ಟು ಮೊಹರು ಮಾಡಲಾಗುತ್ತದೆ. ದುರ್ಬಲೀಕೃತ ಬಾಹ್ಯಜೀವಿವಿಷವನ್ನು ಪ್ರಾಯೋಗಿಕ ಪ್ರಾಣಿಗಳಲ್ಲಿ ಉಪಯೋಗಿಸುವಂತೆ ಅಲ್ಪಪ್ರಮಾಣದಲ್ಲಿ ಮಾನವರಿಗೇ ಕೊಡುವುದರಿಂದ ಮುಂದೆಂದೋ ಅವನು ಡಿಫ್ತೀರಿಯ ರೋಗಲಕ್ಷಣಗಳಿಂದ ನರಳಬೇಕಾಗುವ ಪ್ರಮೇಯವನ್ನು ನಿವಾರಿಸಬಹುದು.

ಧನುರ್ವಾಯು (ಟಿಟನಸ್) : ಕ್ಲಾಸ್ಟ್ರಿಡಿಯಮ್ ಟೆಟನಿ ಎಂಬ ವಿಷಾಣುವಿನ ಸೋಂಕಿನಿಂದ ಉಂಟಾದುದು. ಆಳವಾದ ಹಾಗೂ ಮಲಿನಗೊಂಡ ಗಾಯಕ್ಕೆ ಈ ಸೋಂಕು ತಗುಲಬಹುದೇ ವಿನಾ ಗಾಯವಿಲ್ಲದ ಸ್ಥಳಗಳಲ್ಲಿ ಸೋಂಕು ಪ್ರಾರಂಭವಾಗಲಾರದು. ಮೇಲೆ ಹೇಳಿದಂಥ ಗಾಯಗಳ ನಿರ್ವಾತ ಆವರಣದಲ್ಲಿ ಸ್ಥಳೀಯವಾಗಿ ನೆಲೆನಿಂತು ವಿಷಾಣುಗಳು ವೃದ್ಧಿಯಾಗಿ ಬಾಹ್ಯಜೀವಿವಿಷವನ್ನು ಸಮೃದ್ಧಿಯಾಗಿ ಸ್ರವಿಸುತ್ತವೆ. ಸೋಂಕು ಹರಡುವುದಿಲ್ಲ. ವಿಷವೂ ಸ್ಥಳೀಯ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ. ಆದ್ದರಿಂದ ಪ್ರಾರಂಭದಲ್ಲಿ ಸೋಂಕು ಲಕ್ಷ್ಯಕ್ಕೆ ಬಾರದೆ ಹೋಗುತ್ತದೆ. ವಿಷದಲ್ಲಿ ಹೀಮೋಟಾಕ್ಸಿನ್ ನ್ಯೂರೋಟಾಕ್ಸಿನ್ನುಗಳು ಎರಡೂ ಇದ್ದರೂ ನ್ಯೂರೋಟಾಕ್ಸಿನ್ ಪ್ರಬಲ ಹಾಗೂ ಅದರ ಅಂಶ ಹೆಚ್ಚು. ಅಲ್ಲದೆ ನ್ಯೂರೋಟಾಕ್ಸಿನ್ನಿಗೆ ನರ, ಮಿದುಳು, ಮಿದುಳು ಬಳ್ಳಿ ಇವುಗಳೊಡನೆ ನಿಕಟವಾಗಿ ಸೇರ್ಪಡೆ ಆಗುವ ಪ್ರವೃತ್ತಿ ಒಂದು ವೈಶಿಷ್ಟ್ಯ. ಇದು ಎಷ್ಟು ಪರಬಲವಾದದ್ದೆಂದರೆ ಪ್ರಯೋಗಾಲಯದಲ್ಲಿ ಮಿದುಳಿನ ಕದಡನ್ನು ವಿಷಕ್ಕೆ ಸೇರಿಸಿ ಅದನ್ನು ನಿರುಪದ್ರವವಸ್ತುವನ್ನಾಗಿ ಮಾಡಬಹುದು. ನರಕ್ಕೆ ವಿಷ ಅಂಟಿಕೊಳ್ಳುವ ಪ್ರವೃತ್ತಿ ಅಷ್ಟು ತೀವ್ರವಾಗಿರುವುದರಿಂದ ಸೋಂಕಿನಲ್ಲಿ ಉತ್ಪಾದಿತವಾದ ವಿಷ ಸ್ಥಳೀಯ ನರಗಳಿಂದ ಪೂರ್ಣವಾಗಿ ಹೀರಲ್ಪಡುತ್ತದೆ. ಅದು ರಕ್ತಗತವಾಗುವುದೇ ಇಲ್ಲ. ನರದ ಉದ್ದಕ್ಕೂ ವ್ಯಾಪಿಸುತ್ತ ಕೊನೆಗೆ ಮಿಕ್ಕನರಗಳು, ಮಿದುಳುಬಳ್ಳಿ, ಮಿದುಳನ್ನು ಸೇರುತ್ತದೆ. ಈ ಕಾರಣದಿಂದಾಗಿ ವಿಷವ್ಯಾಪನೆ ಬಲುನಿಧಾನ. ದಿವಸಗಳು ವಾರಗಳೇ ಆಗಬಹುದು. ವ್ಯಾಪಿಸಿದ ಸ್ಥಳದಲ್ಲಿ ವಿಷ ಹೇಗೆ ಕಾರ್ಯಗತವಾಗುತ್ತದೆ ಎನ್ನುವುದು ತಿಳಿಯದು. ಅಂತೂ ಐಚ್ಛಿಕಸ್ನಾಯುಗಳು ಸೆಟೆದುಕೊಂಡು ಸ್ವಾಧೀನತಪ್ಪುವುದು ಮತ್ತು ಅದಿರುವಾಯು ಉಂಟಾಗುತ್ತದೆ. ವಿಷ ರಕ್ತದಲ್ಲಿರುವುದಿಲ್ಲವಾದ್ದರಿಂದ ಮತ್ತು ನರಗಳಲ್ಲಿ ಶಾಶ್ವತವಾಗಿ ಸೇರಿಬಿಟ್ಟಿರುವುದರಿಂದ ವಿಷಹಾರಿಯನ್ನು ಕೊಟ್ಟರೂ ಅಷ್ಟು ಉಪಯೋಗವಾಗುವುದಿಲ್ಲ. ವಿಷಮಸ್ಥಿತಿ ತೀವ್ರವಾಗಿಲ್ಲದಿದ್ದರೆ ಸೋಂಕು ಗುಣವಾದ ಬಳಿಕ ಸಾವಕಾಶವಾಗಿ ಸ್ನಾಯುನರಗಳ ಸಹಜಕ್ರಿಯೆ ಪುನಃ ಪ್ರಾಪ್ತಿಯಾಗುತ್ತದೆ. ತೀವ್ರವಾಗಿದ್ದರೆ ಸ್ನಾಯುಸೆಟೆತ, ತತ್ಪರಿಣಾಮವಾಗಿ ಅಗಾಧಶ್ರಮ, ಉಸಿರುಕಟ್ಟುವುದು, ನಿರಾಹಾರಸ್ಥಿತಿ ಇಂಥ ಕಾರಣಗಳಿಂದ ಮರಣ ಸಂಭವಿಸುತ್ತದೆ. 

ಬಾಟ್ಯುಲಿಸಮ್ : ಇದೊಂದು ವಿಷಯುಕ್ತ ಆಹಾರ ಸೇವನೆಯ ಪರಿಣಾಮ. ಅತಿ ಶೀಘ್ರವಾಗಿ ಮಾರಕವಾಗಬಹುದಾದ ಪರಿಸ್ಥಿತಿ. ಕ್ಲಾಸ್ಟ್ರಿಡಿಯಮ್ ಬ್ಯಾಟ್ಯು ಲೈನಮ್ ಎಂಬ ವಿಷಾಣುವಿನ ಬಾಹ್ಯಜೀವಿವಿಷವೇ ಕಾರಣ. ವಿಷಾಣುವಿನ ಸೋಂಕಿನಿಂದ ಪ್ರಾಣಿದೇಹದಲ್ಲಿ ವಿಷ ಉತ್ಪನ್ನವಾಗುವ ಪ್ರಮೇಯ ಇಲ್ಲಿ ಕಂಡುಬರುವುದಿಲ್ಲ. ಆದರೆ ದೇಹಕ್ಕೆ ವಿಷ ಸೇರುವುದು ಹೀಗೆ. ಡಬ್ಬಿಗಳಲ್ಲಿ ಮೊಹರುಮಾಡಿ ಶೇಖರಿಸಲ್ಪಟ್ಟಿರುವ ಆಹಾರದಲ್ಲಿ ಆಚಾತುರ್ಯದಿಂದ ಮೊದಲೇ ವಿಷಾಣುಬೀಜ ಸೇರಿರಬಹುದು. ಡಬ್ಬಿಯ ನಿರ್ವಾತ ಆವರಣದಲ್ಲಿ ವಿಷಾಣು ವೃದ್ಧಿಗೊಳ್ಳುತ್ತ ಆಹಾರವನ್ನು ಕೆಡಿಸಿ ವಿಷವನ್ನು ಸ್ರವಿಸುತ್ತದೆ. ಹೀಗೆ ಆಗಿರಬಹುದು ಎನ್ನುವುದನ್ನು ಮೊಹರುಮಾಡಿದ ಡಬ್ಬಿಯ ಪರೀಕ್ಷೆಯಿಂದ ಊಹಿಸಬಹುದು. ಆಹಾರ ಕೆಟ್ಟುಹೋಗಿದ್ದರೆ ಡಬ್ಬಿಯ ತಳ ಹಾಗೂ ಮುಚ್ಚಳ ಭಾಗಗಳು ಉಬ್ಬಿಕೊಂಡಿರುತ್ತವೆ. ಡಬ್ಬಿಯ ಆಹಾರದಲ್ಲಲ್ಲದೆ ಕೆಲಕಾಲ ಬೆಚ್ಚಗೆ ಮುಚ್ಚಿಟ್ಟಿದ್ದಾಗ ದಿನನಿತ್ಯದ ಆಹಾರದಲ್ಲೂ ವಿಷಾಣುವೃದ್ಧಿಯಾಗಿ ಅದು ಕೆಟ್ಟು ಹೋಗಿರಬಹುದು. ಇಂಥ ಆಹಾರಗಳ ಸೇವನೆಯಿಂದ ವಿಷಾಣು ದೇಹದೊಳಕ್ಕೆ ಹೋಗುತ್ತದೆ. ಇದು ಮುಖ್ಯವಲ್ಲ. ಜೊತೆಗೇ ವಿಷಾಣುಸ್ರವಿತ ವಿಷವೂ ದೇಹಗತವಾಗುತ್ತದೆ. ವಿಷವು ಜೀರ್ಣನಾಳದಲ್ಲಿ ನರಗತವಾಗುತ್ತದೆ. ಧನುರ್ವಾಯುವಿನ ವಿಷದಂತೆಯೇ. ಅದು ರಕ್ತಗತವಾಗುವುದಿಲ್ಲ. ವಿಷ ಒಂದೇ ವಸ್ತುವಿನಿಂದಾಗಿರಬೇಕು ಎಂದೇನಿಲ್ಲ. ವಿಷಾಣುಗಳ ವಿವಿಧ ಪ್ರಭೇದಗಳು ಂ. ಃ, ಅ, ಆ, ಇ. ಗಳೆಂಬ ಬೇರೆ ಬೇರೆ ಬಾಟ್ಯುಲೈನಮ್ ವಿಷವನ್ನು ಉತ್ಪಾದಿಸುತ್ತವೆ. ಎಲ್ಲವೂ ಅಥವಾ ಕೆಲವು ಮಾತ್ರ ದೇಹಗತವಾಗಿರಬಹುದು. ಎಲ್ಲವೂ ನ್ಯೂರೋಟಾಕ್ಸಿನ್ನುಗಳೇ, 8-9 ಮಿನಿಟುಗಳು ಕುದಿಸಿದರೂ ವಿಷಗುಣ ನಾಶವಾಗದ ವಸ್ತುಗಳು. ಹೀಗೆ ಮಾಡಿದರೆ ಸಾಮಾನ್ಯವಾಗಿ ಮಿಕ್ಕ ಬಾಹ್ಯ ಜೀವಿವಿಷಗಳು ನಾಶವಾಗಿ ಹೋಗುತ್ತವೆ. ಜೀರ್ಣರಸಗಳಿಂದಲೂ ಬಾಟ್ಯು ಲೈನಮ್ ವಿಷ ನಾಶವಾಗುವುದಿಲ್ಲ. ಆದ್ದರಿಂದಲೇ ವಿಷಯುಕ್ತ ಆಹಾರ ಸೇವನೆಯ ಪ್ರಸಂಗಗಳಲ್ಲಿ ಇದು ಜೀರ್ಣನಾಳದ ಮೂಲಕ ದೇಹಗತವಾಗಿ ರೋಗವನ್ನು ಉಂಟುಮಾಡಬಲ್ಲದು. ಡಿಫ್ತೀರಿಯ, ಧನುರ್ವಾಯುಗಳ ಅಣುಗಳ ವಿಷ ಜೀರ್ಣಿಸಲ್ಪಡುವುದರಿಂದ ಅದನ್ನು ಸೇವಿಸಿದರೆ ಏನೂ ಅಪಾಯವಿಲ್ಲ. ಬಾಟ್ಯುಲೈನಮ್ ವಿಷದಿಂದ ಉಂಟಾಗುವ ಪರಿಸ್ಥಿತಿಗೆ ಬಾಟ್ಯುಲಿಸಮ್ ಎಂದು ಹೆಸರು. ನರಸ್ನಾಯುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಇವುಗಳ ಕ್ರಿಯೆ. ಮಾನವರಲ್ಲಿ ವಪೆ ಮತ್ತು ಇತರ ಐಚ್ಛಿಕ ಸ್ನಾಯುಗಳ ಮೇಲಿನ ಹತೋಟಿ ತಪ್ಪಿಹೋಗುತ್ತದೆ. ವಾಂತಿ, ಮಲಬದ್ಧತೆ, ಕಣ್ಣುಗಳನ್ನು ಅರ್ಥವಾತ್ತಾಗಿ ಹೊರಳಿಸುವುದಕ್ಕಾಗದೆ ದ್ವಿದೃಷ್ಟಿ (ಡಿಪ್ಲೋಪಿಯ) ನುಂಗುವುದಕ್ಕಾಗದಿರುವುದು (ಡಿಸ್‍ಫೇಜಿಯ)-ಇವೆಲ್ಲ ಕಂಡುಬಂದು, ಉಸಿರಾಟ ಸಾಧ್ಯವಾಗದೆ, ಗರಿಷ್ಠ ಎಂದರೆ 7 ದಿವಸಗಳೊಳಗೆ ಮರಣ ಸಂಭವಿಸುತ್ತದೆ. ಧನುರ್ವಾಯುವಿನಲ್ಲಿಯಂತೆಯೇ ಬಾಟ್ಯುಲಿಸಮ್ಮಿನಲ್ಲೂ ವಿಷಹಾರಿಯ ಪ್ರಯೋಗ ಹೆಚ್ಚು ಕಡಿಮೆ ನಿಷ್ಟ್ರಯೋಜಕ, ಅವೇ ಕಾರಣಗಳಿಂದಾಗಿ.

ಅನಿಲಯುಕ್ತ ಕೊಳೆತ (ಗ್ಯಾಸ್‍ಗ್ಯಾಂಗ್ರೀನ್) : ಬೇರೆ ಬೇರೆ ವಿಷಾಣುಗಳ ಬಾಹ್ಯಜೀವಿವಿಷಗಳಿಂದ ಉಂಟಾಗುವ ಒಂದು ಪರಿಸ್ಥಿತಿ. ಒಂದೊಂದು ವಿಧದ ವಿಷಾಣುವೂ ಒಂದಕ್ಕಿಂತ ಹೆಚ್ಚು ವಿಷವಸ್ತುವನ್ನು ಸ್ರವಿಸಬಹುದು. ಈ ವಿಷಗಳು ದುರ್ಬಲ ನ್ಯೂರೋಟಾಕ್ಸಿನ್ ಮತ್ತು ಪ್ರಬಲ ಹೋಮೋಟಾಕ್ಸಿನ್ನಿನ ಮಿಸ್ರಣಗಳು. ವ್ಯಾಪಕವಿಷಮಾವಸ್ಥೆ ಅಪರೂಪ, ಸ್ಥಳೀಯವಾಗಿ ತೀವ್ರ ಪ್ರತಿಕ್ರಿಯೆ ಸಾಮಾನ್ಯ. ಸಾಧಾರಣವಾಗಿ ಕ್ಲಾಸ್ಟ್ರಿಡಿಯಮ್ ವೆಲ್ಕಿಯೈ ಎಂಬ ವಿಷಾಣುವಿನ ಸೋಂಕು ಇದಕ್ಕೆ ಕಾರಣ. ವಿಷ ಲೆಸಿಥಿನ್ನನ್ನು ವಿಶ್ಲೇಷಿಸುವ ಕಿಣ್ವ, ಕೋಶನಾಶಕವಸ್ತು, ಇನ್‍ವೇಸಿನ್ ಮುಂತಾದವುಗಳ ಮಿಶ್ರಣ. ಇವುಗಳ ಕ್ರಿಯೆಯಿಂದ ಸ್ಥಳೀಯವಾಗಿ ಸ್ನಾಯು ಮತ್ತು ಇತರ ಊತಕಗಳು ಅಕ್ಷರಶಃ ಕೊಳೆತುಹೋಗುತ್ತವೆ. ಸಾವಧಾನವಾಗಿ ಸೋಂಕೂ ವಿಷವೂ ನೆರೆಪ್ರಾಂತ್ಯಗಳಿಗೆ ವ್ಯಾಪಿಸುತ್ತವೆ. ಕೊಳೆತ ಹಾಗೂ ಆಕ್ಸಿಜನ್ ಅಭಾವವಾಗಿರುವ ಸ್ಥಳದಲ್ಲಿ ಮಾತ್ರ ವಿಷಾಣು ವೃದ್ಧಿ ಕಂಡುಬರುತ್ತದೆ. ವೃದ್ಧಿಯ ಕಾಲದಲ್ಲಿ ಅನೇಕ ಅನಿಲಗಳ ಬಿಡುಗಡೆ ಆಗುವುದರಿಂದ ಅನಿಲಗಳು ಊತಕಗಳ ನಡುವೆ ಸೇರಿಕೊಂಡು ಆ ಸ್ಥಳವನ್ನು ಮುಟ್ಟಿದರೆ ಜಿಲ್ ಜಿಲ್ ಎಂದು ಶಬ್ದವಾಗುವುದು ಒಂದು ವೈಶಿಷ್ಟ್ಯ.

ಕೀವನ್ನು ಉಂಟುಮಾಡುವ ದಂಡಾಣುಗಳು (ಸಪ್ಪುರೇಟಿಂಗ್ ಕಾಕೈ); ಸ್ಟ್ರೆಪ್ಟೊಕಾಕಸ್ ಹೀಮಾಲಿಟಿಕಸ್, ಸ್ಟ್ರೆ, ಪೈಯೋಜೆನೀಸ್, ಸ್ಟಾಫಿಲೋಕಾಕಸ್ ಆರಿಯಸ್ ಮುಂತಾದವುಗಳ ಸೋಂಕಿನಿಂದ ಉಂಟಾಗುವ ಪರಿಸ್ಥಿತಿ. ಈ ವಿಷಾಣುಗಳು ದೇಹಕ್ಕೆ ತಾಕುವುದೇ ಅಲ್ಲದೆ ವ್ಯಾಪಕವಾಗಿಯೂ ಹರಡುತ್ತವೆ. ರಕ್ತದ ವಿಷಮಸ್ಥಿತಿ (ಸೆಪ್ಟಿಸೀಮಿಯ) ಸಾಮಾನ್ಯ. ಇದು ಡಿಫ್ತೀರಿಯ, ಧನುರ್ವಾಯು ಮುಂತಾಗಿ ಮೇಲೆ ಹೇಳಿದ ಸೋಂಕುಗಳಲ್ಲಿ ಕಾಣಲಾಗದ ಸ್ಥಿತಿ. ಸೋಂಕಿನ ವ್ಯಾಪನೆ ಮತ್ತು ರೋಗಪರಿಸ್ಥಿತಿ ಎರಡೂ ವಿಷಾಣುಗಳ ಬಾಹ್ಯಜೀವಿವಿಷಗಳಿಂದಲೇ ಉಂಟಾಗುತ್ತವೆ. ಸ್ಟ್ರೆಪ್ಟೋಕಾಕಸ್ಸಿನ ವಿಷ ಇನ್‍ವೇಸಿನ್, ಸ್ಟ್ರೆಪ್ಟೊಕೈನೇಸ್, ಸ್ಟ್ರೆಪ್ಟೊಲೈಸಿನ್ ಎಂಬ ಹೀಮೋಟಾಕ್ಸಿನ್, ಕೆಂಪುಮಚ್ಚೆಗಳನ್ನು ಉಂಟು ಮಾಡುವ ವಿಷವಸ್ತು ಮುಂತಾದ ಅನೇಕ ವಸ್ತುಗಳ ಮಿಶ್ರಣ. ಚರ್ಮದ ಗಾಯಕ್ಕೆ ಸೋಂಕು ತಗಲಿದರೆ ಕೀವುತುಂಬಿದ ಬಾವು ಉಂಟಾಗುತ್ತದೆ. ಇನ್‍ವೇಸಿನ್ ಸ್ಟ್ರೆಪ್ಟೊಕೈನೇಸುಗಳ ಕ್ರಿಯೆಯಿಂದ ಸೋಂಕು ವ್ಯಾಪಿಸಿದಾಗ ರಕ್ತ ವಿಷಮತೆ, ದೇಹ ಅನೇಕ ಕಡೆ ಕೀವುತುಂಬಿದ ಬಾವುಗಳು ಕಾಣಿಸಿಕೊಳ್ಳುವುದು. ಸ್ನಾಯುಗಳ ನಾಶ ಮುಂತಾದ ಪರಿಣಾಮಗಳು ಉಂಟಾಗುತ್ತವೆ. ಹೆರಿಗೆ ಕಾಲದಲ್ಲಿ ಸೋಂಕು ಯೋನಿಗೆ ತಾಕಿದ್ದರೆ ಬಾಣಂತಿ ಜ್ವರ (ಪ್ಯೂಪ್ಯೂರಿಯಲ್ ಸೆಪ್ಸಿಸ್) ಉಂಟಾಗುತ್ತದೆ. ಗಂಟಲಿಗೆ ಸೋಂಕು ತಾಕಿದರೆ ಗಂಟಲುನೋವು. ಕಿವಿನೋವು. ನ್ಯೂಮೋನಿಯಗಳು ಉಂಟಾಗುತ್ತವೆ. ಸ್ಟಾಫಿಲೋಕಾಕಸ್ಸಿನ ವಿಷದಲ್ಲಿ ಸ್ಟಾಫಿಲೋಕೈನೇಸ್, ಸ್ಟಾಫಿಲೋಕೊಯಾಗ್ಯುಲೇಸ್, ಮೂರು ನಾಲ್ಕು ಬೇರೆ ಬೇರೆ ಹೀಮೋಲೈಸಿನ್ನುಗಳು, ಜೀವಕೋಶನಾಶಕಗಳು, ಎನ್‍ಟೆರೋಟಾಕ್ಸಿನ್ ಎಂಬ ವಸ್ತುಗಳಿರುತ್ತವೆ. ಸ್ಟಾಫಿಲೊಕೈನೇಸ್ ಪ್ರಬಲವಸ್ತುವಾಗಿಲ್ಲದಿರುವುದರಿಂದ ಮತ್ತು ಸ್ಟಾಫಿಲೋಕೊಯಾಗ್ಯುಲೇಸಿನ ಪ್ರಭಾವದಿಂದ ಸೋಂಕು ಸಾಮಾನ್ಯವಾಗಿ ಸ್ಥಳೀಯವಾಗಿ ನೆಲೆಗೊಂಡು ಕೀವುಬಾವು (ಆಬ್ಸೆಸ್), ಎಲುಬಿನ ಊತ (ಆಸ್ಟಿಯೋಮೈಯಲೈಟಿಸ್) ಇವು ಉಂಟಾಗುವುದೇ ಸಾಮಾನ್ಯ. ಎನ್‍ಟೆರೋಟಾಕ್ಸಿನ್ ಎಂಬುದು ವಿಷಯುಕ್ತ ಆಹಾರಸೇವನೆಯ ತರುವಾಯದ ವಾಂತಿ ಭೇದಿಗಳಿಗೆ ಕಾರಣ. ಈ ವಿಷವಸ್ತುವೂ ಬಾಟ್ಯುಲಿನ್ ವಿಷವಸ್ತುವಿನಂತೆಯೇ ದೇಹದಲ್ಲಿ ಉತ್ಪನ್ನವಾಗುತ್ತವೆ. ಆದರೆ ರೋಗವನ್ನು ಉಂಟುಮಾಡುವುದಿಲ್ಲ. ವಿಷ ಹೊರಗೇ ಉತ್ಪಾಧಿತವಾಗಿ ಆಹಾರದೊಡನೆ ಸೇವಿಸಲ್ಪಟ್ಟು ವಾಂತಿಭೇದಿಗಳನ್ನು ಉಂಟುಮಾಡುತ್ತದೆ. ಪಿಷ್ಟಾಂಶ ಹೆಚ್ಚಾಗಿರುವ ಪದಾರ್ಥಗಳಿಂದ ಕೊಳಕು ಅಡುಗೆಯವರು ತಯಾರಿಸಿ ಬೆಚ್ಚನೆ ಸ್ಥಿತಿಯಲ್ಲಿ ಕೆಲಕಾಲ ಇಟ್ಟಿದ್ದ ಆಹಾರವಸ್ತುಗಳಲ್ಲಿ ವಿಷಾಣುಗಳು ವೃದ್ಧಿಸಿ ವಿಷವನ್ನು ಸ್ರವಿಸಿರುತ್ತವೆ. ಇಂಥ ವಿಷಯುಕ್ತ ಆಹಾರ ಸೇವನೆಯಿಂದಾಗುವ ವಾಂತಿಭೇದಿಗಳು ಸ್ವಯಂ ಶಾಮಕ. ಸಾಮಾನ್ಯವಾಗಿ 24-36 ಗಂಟೆಗಳಲ್ಲಿ ತಾನಾಗಿಯೇ ಶಮನಗೊಳ್ಳುತ್ತವೆ, ಎಂದೂ ಮಾರಕವಲ್ಲ. ವಿಷಯುಕ್ತ ಆಹಾರಸೇವನೆಯಿಂದ ಪ್ರತಿಯೊಬ್ಬರೂ ಯಾವಾಗಲಾದರೂ ವಾಂತಿ ಮತ್ತು ಅಥವಾ ಭೇದಿಯಿಂದ ನರಳಿಯೇ ಇರುತ್ತಾರೆ.

ಆಂತರಿಕ ಜೀವಿವಿಷಗಳು : ಸಾಮಾನ್ಯವಾಗಿ ಗ್ರಾಮ್ ಋಣ ವಿಷಾಣುಗಳ ಕವಚ ಇಲ್ಲವೇ ಶರೀರದ ಒಂದು ರಾಸಾಯನಿಕ ಘಟಕ. ವಿಷಾಣುಗಳು ಸ್ವಯಂ ಜೀರ್ಣಕ್ರಿಯೆಯಿಂದ (ಆಟಾಲಿಸಿಸ್) ಮತ್ತು ಔಷಧ ಮುಂತಾದ ಅನ್ಯಕಾರಣಗಳಿಂದ ಛಿದ್ರಗೊಂಡಾಗ ಆಂತರಿಕ ಜೀವಿವಿಷ ಬಿಡುಗಡೆ ಆಗುತ್ತದೆ. ಇದು ಸಸ್ಯ ಹಾಗೂ ಪ್ರಾಣಿಗಳ ಕೋಶಗಳಲ್ಲಿ ಇರುವುದಿಲ್ಲ. ವಿಷಾಣುಗಳನ್ನು ಅರೆದು ಸಾರವನ್ನು ಪ್ರತ್ಯೇಕಿಸಿ ಆಂತರಿಕ ವಿಷವನ್ನು ಪಡೆಯಬಹುದು ; ಇಲ್ಲವೇ ಟ್ರೈಕ್ಲೋರ್ ಅಸೆಟಿಕ್ ಆಮ್ಲ, ಗ್ಲೈಕಾಲ್ ಇವುಗಳ ಸಹಾಯದಿಂದ ಈ ವಿಷಗಳನ್ನು ವಿಷಾಣುದೇಹದಿಂದ ಹೊರತೆಗೆಯಬಹುದು. ಇವು ಪ್ರೋಟೀನ್ ಕೊಬ್ಬು ಮತ್ತು ಪಿಷ್ಟಗಳ ಸಂಯುಕ್ತವಸ್ತುಗಳು (ಲೈಪೋ ಪ್ರೋಟೀನ್ ಪಾಲಿಸ್ಯಾಕರೈಡ್ಸ್). ಕೊಬ್ಬಿನ ಅಂಶವನ್ನು ಪ್ರಾಯೋಗಿಕವಾಗಿ ನಾಶಪಡಿಸಿದರೂ ಅನೇಕ ವೇಳೆ ಇವುಗಳ ವಿಷಗುಣ ನಾಶವಾಗುವುದಿಲ್ಲ. ಆದರೆ ಪ್ರೋಟೀನ್ ಘಟಕವನ್ನೋ ಪಿಷ್ಟಾಂಶವನ್ನು ನಾಶಪಡಿಸಿದರೆ ವಿಷಗುಣವೂ ನಾಶವಾಗುತ್ತದೆ. ಉಷ್ಣತೆಯಿಂದ ಬಾಹ್ಯಜೀವಿಗಳು ನಾಶವಾಗುವುವು; ಇವು ನಾಶವಾಗುವುದಿಲ್ಲ. ಆದರೆ ಆಮ್ಲ ಮಾಧ್ಯಮದಲ್ಲಿ 1,000ಅ ಉಷ್ಣತೆಯಲ್ಲಿ ಪೂರ್ತಿಯಾಗಿ ನಾಶವಾಗುತ್ತವೆ. ದೇಹದಲ್ಲಿ ಇವೂ ವಿಷಹಾರಿಗಳನ್ನು ಉತ್ಪಾದಿಸಬಲ್ಲವು. ಆಂತರಿಕವಿಷ ಬಾಹ್ಯವಿಷಕ್ಕಿಂತ ಸಾವಿರಪಾಲು ದುರ್ಬಲ. ಅವು ಉತ್ಪಾದಿಸುವ ವಿಷಹಾರಿಗಳೂ ಹಾಗೆಯೇ; ಬಾಹ್ಯವಿಷಹಾರಿಗಳಿಗಿಂತ 200-300 ಪಾಲು ದುರ್ಬಲ. ಬಾಹ್ಯವಿಷಗಳು ವಿವಿಧ ಹಾಗೂ ವಿಶಿಷ್ಟ ರೋಗ ಸ್ಥಿತಿಗಳನ್ನು ಉಂಟುಮಾಡುವುದು ಆದರೆ ಆಂತರಿಕವಿಷಗಳೆಲ್ಲ ಹೆಚ್ಚು ಕಡಿಮೆ ಒಂದೇ ರೀತಿಯ ಪರಿಣಾಮವನ್ನು ಉಂಟುಮಾಡುತ್ತವೆಂದು ತೋರುತ್ತದೆ. ಟೈಫಾಯಿಡ್‍ಕಾರಕದ ಆಂತರಿಕವಿಷ, ಗಾನರಿಯಕಾರಕದ ಆಂತರಿಕವಿಷ. ಪರಿಣಾಮ ಒಂದೇರೀತಿಯದಾಗಿದೆ. ಅಗಾಧವಾಗಿದರೂ ಅವ್ಯಕ್ತ. ಮರಣೋತ್ತರ ಪರೀಕ್ಷೆಯಲ್ಲಿ ಆಂತರಿಕವಿಷದಿಂದ ಉಂಟಾದ ಸ್ಥಿತಿ ಎಂದು ನಿರ್ದಿಷ್ಟವಾಗಿ ಏನನ್ನೂ ಗುರುತಿಸುವ ಹಾಗಿಲ್ಲ. ಜ್ವರಬರುವುದು ಸಾಮಾನ್ಯ. ರಕ್ತನಾಳಗಳ ಭಿತ್ತಿಯಲ್ಲಿನ ರಂಧ್ರಗಳನ್ನು ಹಿಗ್ಗಿಸಿಯೋ ಜೀವಕೋಶಗಳ ಆಂತರಿಕ ಶ್ವಸನಕ್ರಿಯೆಯನ್ನು ಅಡ್ಡಿಪಡಿಸಿಯೋ ಇವು ತೊಂದರೆಯನ್ನು ಉಂಟುಮಾಡುತ್ತವೆಂದೂ ಕಾಣಿಸುತ್ತದೆ. ಅಂತೂ ಪರಿಣಾಮಗಳು ಉಂಟಾದರೆ ಚೇತರಿಸಿಕೊಳ್ಳುವುದೂ ಕಷ್ಟ. ಟೈಫಾಯಿಡ್, ಪ್ಯಾರಾಟೈಫಾಯಿಡ್, ಆಮಶಂಕೆ, ಕಾಲರಾ, ಪ್ಲೇಗ್, ಬೂಸೆಲ್ಲೋಸಿನ್, ನಾಯಿಕೆಮ್ಮು ಮುಂತಾದ ರೋಗಸ್ಥಿತಿಗಳಿಗೂ ಇನ್‍ಫ್ಲೂಎನ್‍ಜಾ, ಟೈಫಸ್, ಶುಕಜ್ವರ (ಸಿಟ್ಟಕೋಸಿಸ್), ಗದ್ದಕಟ್ಟು ಮುಂತಾದ ರೋಗಗಳಿಗೂ ಆಯಾ ರೋಗಕಾರಕ ಜನ್ಯ ಆಂತರಿಕ ಜೀವಿವಿಷಗಳೇ ಕಾರಣ.
(ಜೆ.ಇ.ಸಿ.ಎಚ್.; ಎಸ್.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ